ರಘುವೀರ್ ಸಹಾಯ್
1929 - . ಹಿಂದೀ ಕವಿ ಮತ್ತು ಕತೆಗಾರರು ಲಕ್ನೋದಲ್ಲಿ 9 ಡಿಸೆಂಬರ್ 1929 ರಂದು ಜನಿಸಿದರು. ಅಲ್ಲಿಯೇ ವಿದ್ಯಾಭ್ಯಾಸವನ್ನು ನಡೆಯಿತು. ತಂದೆ ಸ್ಕೂಲ್ ಮಾಸ್ತರರು.  ಇವರದು ಮಧ್ಯಮವರ್ಗದ ಕುಟುಂಬ. ತಂದೆಯ ಧರ್ಮಭೀರುತ್ವ, ಸರಳತೆ ಮತ್ತು ಸಹೃದಯತೆಯ ಪ್ರಭಾವ ರಘುವೀರರ ಮೇಲೆ ದಟ್ಟವಾಗಿ ಆಗಿದೆ ಎನ್ನಲಾಗಿದೆ. ಬಾಲ್ಯದ ಓದು ಬರೆಹದಲ್ಲಿ ಇವರದು ಸಾಧಾರಣ ಪ್ರತಿಭೆ. ತೃತೀಯ ದರ್ಜೆಯಲ್ಲಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪ್ರಥಮ ಎಂ. ಎ. ತರಗತಿಯಲ್ಲಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಕೊಡಲಾಗಲಿಲ್ಲ (1949). ಸ್ನಾತಕೋತ್ತರ ತರಗತಿಯಲ್ಲಿ ಓದುತ್ತಿದ್ದಾಗ `ನವಜೀವನ್` ಎಂಬ ಹಿಂದೀ ದೈನಿಕದ ಉಪಸಂಪಾದಕರಾಗಿ ಸ್ವಲ್ಪಕಾಲ ಕಾರ್ಯನಿರ್ವಹಿಸಿ ಪತ್ರಿಕೋದ್ಯಮದಲ್ಲಿ ಅನುಭವ ಗಳಿಸಿದರು. 1975 ರ ಅನಂತರ ಇವರು ದಿನಮಾನ್ ಸಾಪ್ತಾಹಿಕದ ಸಂಪಾದಕರಾದರು. ಸಂಗೀತ ಮತ್ತು ಪೋಟೋಗ್ರಫಿ ಇವರ ಹವ್ಯಾಸಗಳು.

ಇವರು ತಮ್ಮ ಕಾವ್ಯದಲ್ಲಿ ಬಚ್ಚನ್ ಮತ್ತು ಹರಿವಂಶರಾಯ್ ಮಾಥುರರನ್ನು ಸ್ಮರಿಸುತ್ತಾರೆ. ಅಜ್ಞೇಯರ ಸಾಹಿತ್ಯದಿಂದ ಪ್ರಭಾವಿತರಾಗಿ ಜನಭಾಷೆಯನ್ನು ಸಾಹಿತ್ಯದ ಭಾಷೆಯನ್ನಾಗಿ ಮಾಡಲು ಯತ್ನಿಸಿದರು.

ರಘುವೀರರು 1946 ರಿಂದ 1949 ರ ತನಕ ಬರೆದ ಕೆಲವು ಕವನಗಳು ಅಜ್ಞೇಯರಿಂದ ಸಂಪಾದಿತವಾದ ದೂಸರಾ ಸಪ್ತಕ್‍ನಲ್ಲಿ ಸಂಕಲಿತವಾಗಿದೆ. ಇವರು ನಯಿ ಕವಿತಾ ಪಂಥಕ್ಕೆ ಸೇರಿದವರು. 1960 ರಲ್ಲಿ ಅಜ್ಞೇಯರಿಂದ ಸಂಪಾದಿತವಾದ ಸೀತಿಯೋಂಪರ್ ಧೂಪ್ ಮೇ ಗ್ರಂಥದಲ್ಲಿ ರಘುವೀರ್ ಸಹಾಯ್ 1967 ರಲ್ಲಿ ಪ್ರಕಟವಾದ ಆತ್ಮಹತ್ಯಾ ಕೇ ವಿರುದ್ ಗ್ರಂಥದಲ್ಲಿ ಇವರ ಕವನಗಳೂ 1972 ರಲ್ಲಿ ಪ್ರಕಟವಾದ ರಾಸ್ತಾ ಇದರ್ ಸೇ ಹೈ ಗ್ರಂಥದಲ್ಲಿ ಕತೆಗಳು ಸಂಗ್ರಹಿತವಾಗಿವೆ.

ಹಸೊ ಹಸೋ ಜಲ್ದೀ ಹಸೋ ಇವರ ಮಹತ್ತ್ವದ ಕೃತಿ. 1967 ರ ಅನಂತರ 1974 ರ ತನಕ ಬರೆಯಲ್ಪಟ್ಟ ಕವನಗಳು ಇದರಲ್ಲಿ ಸಂಗ್ರಹಗೊಂಡಿವೆ. ಈ ಕೃತಿ 1976 ರಲ್ಲಿ ಪ್ರಕಟವಾಗಿ 1979 ರಲ್ಲಿ ಮರುಮುದ್ರಣವನ್ನು ಕಂಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕøತವಾದ ಈ ಕೃತಿ ರಘುವೀರ ಸಹಾಯ್ ಅವರನ್ನು ಜಾಗರೂಕ ಕಲಾಕಾರರೆಂದು ಸಾರುತ್ತದೆ.
(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ